ಬುದ್ಧ, ಬಸವ, ಅಂಬೇಡ್ಕರ್ ಹಿರೋಗಳನ್ನಾಗಿ ಕಾಣಿ : ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಕರೆ

0
55

ಕಲಬುರಗಿ: ವಿದ್ಯಾರ್ಥಿಗಳು ಬುದ್ಧ, ಬಸವಣ್ಣ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ನಿಮ್ಮ ಜೀವನದ ನಿಜವಾದ ಹೀರೋಗಳನ್ನಾಗಿ ಕಾಣಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ನಗರದ ಕೋಟನೂರ ರಸ್ತೆಯ ಶ್ರೀ ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚಿತ್ರನಟರನ್ನು ತಮ್ಮ ಹಿರೋಗಳೆಂದು ಭಾವಿಸಿ ವಿದ್ಯಾರ್ಥಿಗಳು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನೀವು ನಿಜವಾದ ಹಿರೋ ಎಂದರೆ ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ಅವರಂತ ನಾಯಕರನ್ನು ಮಾದರಿಯಾಗಿಟ್ಟುಕೊಂಡು ಅಭ್ಯಾಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹೋರಾಟಗಾರ ದಿ.ಎಂ.ಬಿ. ಅಂಬಲಗಿ ಅವರು ಸ್ಥಾಪಿಸಿದ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಚಿತ್ತಾಪುರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿದ್ದಣ್ಣ ಕುಳಗೇರಿ ಮಾತನಾಡಿ, ಈ ಎರಡು ವರ್ಷ ನಿಮ್ಮ ಜೀವನದ ಪ್ರಮುಖ ಘಟ್ಟ. ಹೀಗಾಗಿ ಸಮಯ ವ್ಯರ್ಥ ಮಾಡದೆ ಶ್ರಮಪಟ್ಟು ಅಭ್ಯಾಸ ಮಾಡಿ ನಿಮ್ಮ ತಂದೆ-ತಾಯಿ ಮತ್ತು ಕಾಲೇಜಿಗೆ ಹೆಸರು ತರಬೇಕು ಎಂದು ಹೇಳಿದರು.

ಖ್ಯಾತ ವೈದ್ಯ ಡಾ.ಸಿ.ಎಸ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೆಶಕರಾದ ಮೊಹಿನಿ ಬುದೂರ, ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ, ಸದಸ್ಯರಾದ ಸಿದ್ದರಾಮಯ್ಯ ಮಠ, ಚನ್ನಬಸಯ್ಯ ಗುರುವಿನ, ಉಪನ್ಯಾಸಕರಾದ ಸಿ.ಎಸ್.ಆನಂದ, ಸಮೀರ ಸಾವಳಗಿ, ಜ್ಯೋತಿ, ಭಾಗ್ಯಶ್ರೀ, ಮರೀಶಾ, ನಿಶಿತಾ ಹಾಗೂ ಅನಘ ವಾಸಮುದ್ರ, ಸವಿತಾ ಬಿರಾದಾರ ಇತರರಿದ್ದರು.

ಸಂಸ್ಥೆ ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಪ್ರಾಸ್ತಾವಿಕ ಮಾತನಾಡಿದರು. ಜಾನಕಿ ಪ್ರಾರ್ಥನಾ ಗೀತೆ ಹಾಡಿದರು. ವಿನೂತ ಸ್ವಾಗತಿಸಿದರು. ಸೋನುಬಾಯಿ ವಂದಿಸಿದರು. ಸುಹಾಸಿನಿ ಹಾಗೂ ಸ್ನೇಹ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here