ಖರ್ಗೆ ಸೋಲಿಸಿದ ಜಾಧವ್‍ಗೆ ಅಳಿಯನ ಸವಾಲು

0
65

ಕಲಬುರಗಿ: ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಪ್ರತಿಷ್ಠಿತ ಕಣವಾಗಿರುವ ಕಲಬುರಗಿ ಲೋಕಸಭಾ ಚುನಾವಣೆಯು ರಾಧಾಕೃಷ್ಣ ದೊಡ್ಡಮನಿ ವರ್ಸೆಸ್ ಡಾ. ಉಮೇಶ ಜಾಧವ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಹಿಂದೆ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಉಮೇಶ ಜಾಧವ ಅವರು ಸೋಲರಿಯದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೊದಲ ಬಾರಿಗೆ ಸೋಲುಣಿಸುವ ಮೂಲಕ ಕಮಲವನ್ನು ಅರಳಿಸಿದ್ದರು.

ಏನಂತಾರೆ ಜನ?: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಡಾ. ಉಮೇಶ ಜಾಧವ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಭಾವಿಸಲಾಗಿತ್ತು. ಆದರೆ ಅವರಿಗೆ ಮಂತ್ರಿ ಸ್ಥಾನ ಕೊಡುವುದು ಒತ್ತಟ್ಟಿಗಿರಲಿ ಈ ಭಾಗದ ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸಲಿಲ್ಲ. ಈ ಮಧ್ಯೆ ಎರಡು ವರ್ಷ ಕೊರೊನಾ ಬಂದುದರಿಂದ ಹೇಳಿಕೊಳ್ಳುವಂತಹ ಸಾಧನೆ ಕೂಡ ಮಾಡಲಾಗಿಲ್ಲ. ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು (ಬಿಜೆಪಿ) ಹಾಗೂ ಗುರುಮಠಕಲ್ ಕ್ಷೇತ್ರದ ಶರಣಗೌಡ ಕಂದಕೂರ (ಜೆಡಿಎಸ್) ಹೊರತುಪಡಿಸಿದರೆ ಬಿಜೆಪಿ ಶಾಸಕರಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಗೆಲ್ಲಲು ಟಫ್ ಆಗಲಿದೆ ಎಂದು ಜನರು ಹೇಳುತ್ತಿದ್ದಾರೆ.

ಅದರಂತೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ವಿರುದ್ಧ ಖರ್ಗೆಯವರ ಅಳಿಯ, ಕುಟುಂಬ ರಾಜಕೀಯದ ಆರೋಪವಿದೆ. ಕೇವಲ ಅಧಿಕಾರಿಗಳು ಮತ್ತು ನೌಕರರ ಸಂಪರ್ಕವಿದ್ದರೆ ಸಾಕೆ? ಎಂಬ ಮಾತುಗಳೂ ಕೇಳಿ ಬರುತ್ತಿವೆ. ಯಾವೊತ್ತೂ ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಓಲೈಸುವ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬಂದರೂ ಪಾರ್ಲಿಮೆಂಟ್‍ನಲ್ಲಿ ಬಹುಮತ ಬರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಗೆಲ್ಲಲು ಟಫ್ ಆಗಲಿದೆ ಎಂದು ಜನ ಅಂದಾಡಿಕೊಳ್ಳುತ್ತಿದ್ದಾರೆ.

Contact Your\'s Advertisement; 9902492681

ಇವೆಲ್ಲ ನೆಗೆಟಿವ್ ಅಂಶಗಳ ಜೊತೆಗೆ ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮೋದಿ ಸರ್ಕಾರ ಹಾಗೂ ಸಂಸದರ ಸಾಧನೆ ಶೂನ್ಯ. ರೈತರ, ಬಡವರ ಪರವಾದ ಕಾಂಗ್ರೆಸ್‍ಗೆ ಮತ ಹಾಕುತ್ತೇವೆ ಎಂದು ಪಾಸಿಟಿವ್ ಅಂಶಗಳನ್ನು ಹೇಳುತ್ತಿದ್ದಾರೆ.

ಜನರ ಮನ ಗೆಲ್ಲಲು ಮೇಲಿಂದ ಮೇಲೆ ಸಭೆ, ಸಮಾರಂಭ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರನ್ನು ಕರೆಸುವಲ್ಲಿ ಹಿಂದೇಟು ಹಾಕಿಲ್ಲ. ಕಲಬುರಗಿಯ ಖಡಕ್ ಬಿಸಿಲನ್ನೂ ಲೆಕ್ಕಿಸದ ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಸುತ್ತುತ್ತಿರುವುದು ಕಂಡು ಬರುತ್ತಿದೆ. ಒಟ್ಟಾರೆಯಾಗಿ ಹೇಳಬೇಕಾದರೆ ತಮ್ಮ ಮಾವ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಸಂಸದ ಡಾ. ಉಮೇಶ ಜಾಧವ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರು ಸವಾಲು ಹಾಕಿದ್ದಾರೆ ಎಂದು ಹೇಳಬಹುದು.

ಡಾ. ಉಮೇಶ ಜಾಧವ ಫ್ಲಸ್:

* ಸೋಲರಿಯದ ಖರ್ಗೆಯನ್ನು ಸೋಲಿಸಿದ್ದು,
* ಸಂಸದರಾಗಿ ಆಯ್ಕೆಯಾಗಿ ಅತಿ ಹೆಚ್ಚಿನ ಪ್ರಶ್ನೆ ಕೇಳಿದ್ದು
* ಬಂಜಾರಾ ಸಮುದಾಯ, ಮೋದಿ ಗಾಳಿ ಬೆನ್ನಿಗಿರುವುದು
* ವೋಟ್ ಬ್ಯಾಂಕ್

ಮೈನಸ್:

* ಗೆದ್ದ ನಂತರ ಕ್ಷೇತ್ರದ ನಂಟು ಕಳೆದುಕೊಂಡದ್ದು
* ಹೇಳಿಕೊಳ್ಳುವಂತಹ ಸಾಧನೆ ಮಾಡದಿರುವುದು
* ಖರ್ಗೆಯವರ ಜನಪ್ರಯತೆ ಎದುರು ಮೋದಿ ಗಾಳಿ ಸಪ್ಪೆ
* ಪಕ್ಷದ ಮುಖಂಡರು ಸಾಥ್ ನೀಡದಿರುವುದು

ರಾಧಾಕೃಷ್ಣ ದೊಡ್ಡಮನಿ ಪ್ಲಸ್

* ರಾಜಕೀಯ ಕೇತ್ರದ ಎಲ್ಲ ಬಗೆಯ ಪಟ್ಟುಗಳು ಕರಗತ
* ಎಐಸಿಸಿ ಅಧ್ಯಕ್ಷ ಖರ್ಗೆ ಅಳಿಯ
* ಕ್ಷೇತ್ರದ ಎಲ್ಲ ಕಾಂಗ್ರೆಸ್ ಶಾಸಕರ ಸಾಥ್
* ಗ್ಯಾರಂಟಿಗಳ ಬಲ

ಮೈನಸ್

* ಸುತ್ತಲಿನವರ ಮಾತು ಒರಟು, ಗಡುಸು ಧ್ವನಿ
* ಕುಟುಂಬ ರಾಜಕೀಯದ ಆರೋಪ
* ಬಿಜೆಪಿ ಸಾಂಪ್ರದಾಯಿಕ ಮತಗಳ ಹೊಡೆತ
* ಜನ ಸಾಮಾನ್ಯರಿಗೆ ಹೊಸ ಮುಖ

ಇಬ್ಬರು ಅಭ್ಯರ್ಥಿಗಳ ಪ್ರಚಾರ ವಸ್ತು ವಿಷಯ: ಸಂಸದರಾಗಿರುವ ಬಿಜೆಪಿಯ ಡಾ. ಉಮೇಶ ಜಾಧವ ಅವರು ಎರಡನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವಂದೇ ಭಾರತ್ ರೈಲು ನಿತ್ಯ ಸಂಚಾರ ಸೇರಿದಂತೆ ಇನ್ನೊಂದು ರೈಲು ಸಂಚಾರ, ಮೋದಿ ಸರ್ಕಾರದ 10 ವರ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿದ್ದರೆ, ರಾಜ್ಯ ಸರ್ಕಾರದ ಗ್ಯಾರಂಟಿಗಳ ಪ್ರಯೋಜನ, ಖರ್ಗೆಯವರ ಕೊಡುಗೆಗಳು, ಕೇಂದ್ರ ಸರ್ಕಾರದ ಅನ್ಯಾಯ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‍ನ ರಾಧಾಕೃಷ್ಣ ಅವರು ಮತ ಕೇಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here