ಕಲಬುರಗಿ: ಬಿಜೆಪಿ ಮುಖಂಡರ ಹತ್ಯೆಗೆ ಸಂಚು ನಡೆಸಿದ ಪ್ರಕರಣ ಕುರಿತು ದೂರು ದಾಖಲು ಮಾಡಲು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ತೆರಳಿದ ವೇಳೆ ಶಾಸಕ ಬಸವರಾಜ್ ಮತ್ತಿಮಡು ಅವರ ವಿರುದ್ಧ ಅಲ್ಲಿನ ಇನ್ಸ್‌ಪೆಕ್ಟರ್ ಏಕ ವಚನದ ಪದ ಬಳಕೆ ಮಾಡಿಕೊಂಡಿರುವುದು ಖಂಡನೀಯ. ಕೂಡಲೇ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಕೀಲ್ ಅಂಗಡಿ ಅವರನ್ನು ಕೂಡಲೇ, ಅಮಾನತು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ದ ಸಿಡಿದ್ದೆದ್ದು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಜಗತ್ ವೃತ್ತದಲ್ಲಿ ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರು ತಮ್ಮ ಡೆತ್‌ನೋಟ್‌ನಲ್ಲಿ ಆಂದೋಲಾ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ, ಮಣಿಕಂಠ ರಾಠೋಡ ಹತ್ಯೆಗೆ ಕಾಂಗ್ರೆಸ್ ಮುಖಂಡರಾದ ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಕನಾಥ ಸಜ್ಜನ, ಪ್ರತಾಪಧೀರ ಪಾಟೀಲ, ಮನೋಜ ಶೇಜೆವಾಲ, ರಾಮನಗೌಡ ಪಾಟೀಲ ಎಂಬುವವರು ಸಂಚು ರೂಪಿಸಿದ್ದಾರೆ ಎಂದು ಬರೆದಿದ್ದಾರೆ. ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ದೂರು ಕೊಡಲು ಹೋದಾಗ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ದಲಿತ ಶಾಸಕನನ್ನು ಏಕವಚನದಲ್ಲಿ ಮಾತನಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಬೃಹತ್ ಪ್ರತಿಭಟನೆ ನಡೆಸಿದರು.
ಪೊಲೀಸರು ದೂರು ಸ್ವೀಕರಿಸಿ ಹಿಂಬರಹವೂ ಕೊಡಲಿಲ್ಲ. ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಬಿಜೆಪಿಯ ಮಾಜಿ ಶಾಸಕರು, ಮುಖಂಡರನ್ನು ಮೂರು ಗಂಟೆ ಕಾಯಿಸಿದ್ದಾರೆ. ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಅವರನ್ನು ಅಮಾನತು ಮಾಡಬೇಕು
ಶಾಸಕ ಬಸವರಾಜ್ ಮತ್ತಿಮಡು, ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಚಂದುಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿ, ಬಿಜೆಪಿ ಕಾರ್ಯಕರ್ತರು ನೂರಾರು ವಾಹನಗಳ ಸಂಚಾರ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸ್, ಜಿಲ್ಲಾಡಳಿತ, ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಅಧಿಕಾರಿಯ ಅಮಾನತಿಗೆ ಆಗ್ರಹಿಸಿದರು.
ಕೊಲೆಗೆ ಸಂಚು ರೂಪಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಸ್ಥಳಕ್ಕೆ ಕಮಿಷನರ್ ಬರಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದ ಬಿಜೆಪಿ ನಾಯಕರು, ಬಳಿಕ ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಆಗಮಿಸಿ, ಎಫ್ಐಆರ್ ಪ್ರತಿ ನೀಡಿ, ಬಿಜೆಪಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ವಿಪ ಸದಸ್ಯ ಅಮರನಾಥ ಪಾಟೀಲ, ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಮಹಾದೇವ ಬೆಳಮಗಿ, ಉಮೇಶ್ ಪಾಟೀಲ್, ಗಂಗಪ್ಪಗೌಡ ಪಾಟೀಲ್, ವಿಶಾಲ ದರ್ಗಿ, ಭಾಗೀರಥಿ ಗುನ್ನಾಪುರ, ಅಪ್ಪು ಕಣಕಿ, ಶಿವಕಾಂತ್ ಮಹಾಜನ್, ರಾಮಚಂದ್ರ ಜಾಧವ್, ರಾಜು ದೇವದುರ್ಗ, ಸುಶೀಲ ಚವ್ಹಾಣ, ಸಂತೋಷ್ ಹಾದಿಮನಿ, ಶಿವ ಅಷ್ಟಗಿ, ಶ್ರೀಧರ್ ಚವ್ಹಾಣ, ಗೋಪಾಲ್ ಚವ್ಹಾಣ ಸೇರಿ ಅನೇಕರು ಭಾಗವಹಿಸಿದ್ದರು.
ಆರು ಜನರ ವಿರುದ್ದ ಎಫ್ಐಆರ್ ದಾಖಲು.! ಬೀದರನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಡೆತ್ ನೋಟ್ ನಲ್ಲಿ ಬಿಜೆಪಿ ಮುಖಂಡರು ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಶುಕ್ರವಾರ ರಾತ್ರಿ ನೀಡಿರುವ ದೂರಿನ ಆಧಾರದ ಮೇಲೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ರಾಜು ಕಪನೂರ್ ಸೇರಿ ಆರು ಜನರ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ರಾತ್ರಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಬಂದಿದ್ದ ಬಿಜೆಪಿ ನಾಯಕರ ಮತ್ತು ಪೊಲೀಸರ ಮಧ್ಯೆ ದೂರು ದಾಖಲಾಗದೆ ಹೈಡ್ರಾಮಾ ನಡೆದಿತ್ತು. ಇದನ್ನು ಖಂಡಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ ಜಿಲ್ಲಾ ಬಿಜೆಪಿ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕೋರ್ಟ್ ಗಮನಕ್ಕೆ ತಂದ ಪೊಲೀಸರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಪ್ರತಾಪ್ ಧೀರ ಪಾಟೀಲ್, ಮನೋಜ್ ಶೇಜೇವಾಲ, ಗೋರಖನಾಥ್ ಸಜ್ಜನ್, ರಾಮನಗೌಡ ಪಾಟೀಲ್ ಅವರ ವಿರುದ್ಧ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ನಾಲ್ಕು ಗಂಟೆ ರಸ್ತೆ ತಡೆ, ಟೈಯರಿಗೆ ಬೆಂಕಿ: ಶನಿವಾರ ಬೆಳಗ್ಗೆ 11ಕ್ಕೆ ಜಗತ್ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ಪ್ರತಿಮೆಗೆ ಹಾರ ಹಾಕುವ ಮೂಲಕ ಹೋರಾಟ ಆರಂಭಿಸಿದರು. ಮಧ್ಯಾಹ್ನ ಎರಡೂವರೆ ಗಂಟೆವರೆಗೆ ಪ್ರತಿಭಟನೆ ನಡೆಸಿದರು. ‘ಸಚಿವ ಪ್ರಿಯಾಂಕ್ ರಾಜೀನಾಮೆ ನೀಡಬೇಕು’, ‘ಪೊಲೀಸ್ ಇಲಾಖೆ ನಡೆಗೆ ಧಿಕ್ಕಾರ’, ಕಾನೂನು ಸುವ್ಯಸ್ಥೆ ಕಾಪಾಡಲು ವಿಲವಾದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ’ ಸೇರಿ ನಾನಾ ಘೋಷಣೆಗಳನ್ನು ನಿರಂತರವಾಗಿ ಕೂಗಿದರು. ಈ ವೇಳೆ ಜಗತ್ ಸರ್ಕಲ್‌ನಲ್ಲಿ ಹತ್ತಾರು ಟೈರ್‌ಗಳನ್ನು ಸುಡುವ ಮೂಲಕ ಪೊಲೀಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.