Tuesday, July 16, 2024
ಮನೆಬಿಸಿ ಬಿಸಿ ಸುದ್ದಿಸೀಲ್‌ಡೌನ್ ಜನರ ನೆರವಿಗೆ ಬರಲಿ ಎಸಿಸಿ ಆಡಳಿತ

ಸೀಲ್‌ಡೌನ್ ಜನರ ನೆರವಿಗೆ ಬರಲಿ ಎಸಿಸಿ ಆಡಳಿತ

ವಾಡಿ: ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟು ನಾಲ್ಕು ಬಡಾವಣೆಗಳು ಸೀಲ್‌ಡೌನ್ ತೆಕ್ಕೆಗೆ ಜಾರಿವೆ. ಇಲ್ಲಿನ ಜನರ ಬದುಕು ನರಕಮಯವಾಗಿದೆ. ಆಹಾರಕ್ಕಾಗಿ ಜನರು ತತ್ತರಿಸುತ್ತಿದ್ದಾರೆ. ವಿಶ್ವ ಮಾರುಕಟ್ಟೆಯ ಅಗ್ರಸ್ಥಾನದಲ್ಲಿರುವ ವಾಡಿ ಎಸಿಸಿ ಸಿಮೆಂಟ್ ಕಂಪನಿ ಜನರ ನೆರವಿಗೆ ಧಾವಿಸಬೇಕು ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ ಜಾಧವ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಂಕರ ಜಾಧವ, ಕಾಗಿಣಾ ನದಿಯ ಅಪಾರ ಪ್ರಮಾಣದ ನೀರು, ನಮ್ಮೂರಿನ ಕಲ್ಲು, ಮಣ್ಣು ಮತ್ತು ಮಾನವ ಶಕ್ತಿಯನ್ನು ಬಳಕೆ ಮಾಡಿಕೊಂಡು ಸಿಮೆಂಟ್ ಉತ್ಪಾದಿಸುವ ಮೂಲಕ ಭಾರಿ ಪ್ರಮಾಣದ ಆರ್ಥಿಕ ಲಾಭ ಮಾಡಿಕೊಳ್ಳುತ್ತಿರುವ ಎಸಿಸಿ ಕಾರ್ಖಾನೆ, ಜನರ ಸಂಕಷ್ಟಕ್ಕೆ ಸ್ಪಂಧಿಸಲು ಮುಂದಾಗುತ್ತಿಲ್ಲ. ತನ್ನ ಕಂಪನಿಯ ನೆರಳಿನಲ್ಲಿರುವ ನಗರದ ಕೂಲಿ ಕಾರ್ಮಿಕರು ಈಗ ಕೊರೊನಾ ಸಂಕಟ ಎದುರಿಸುತ್ತರಿದ್ದಾರೆ. ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿದ್ದು ಹಸಿವಿನಿಂದ ನರಳುತ್ತಿದ್ದಾರೆ. ದಿನಸಿಗಾಗಿ ದಿನದಿನವೂ ಪರಿತಪಿಸುತ್ತಿದ್ದಾರೆ.

ಸೀಲ್‌ಡೌನ್ ಬಡಾವಣೆಗಳಿಗೆ ಅಗತ್ಯ ಪ್ರಮಣದಲ್ಲಿ ಆಹಾರ ಸಾಮಾಗ್ರಿ ಪೂರೈಸಬೇಕಾದ ಸರಕಾರ ನಿರ್ಲಕ್ಷ್ಯ ತೋರಿದೆ. ಪಡಿತರ ಚೀಟಿಯಿಂದ ದೊರೆತ ಅಕ್ಕಿ ಗೋದಿಯಿಂದ ಬದುಕು ಸಾಗಿಸುವುದು ಕಷ್ಟ. ಎಣ್ಣೆ, ಖಾರ, ತರಕಾರಿ, ಸಕ್ಕರೆ, ಸಾಬೂನು, ಹಾಲು, ಇನ್ನಿತರ ದಿನಸಿಗಾಗಿ ಮತ್ತೆ ಕೈಚಾಚಬೇಕಾದ ಹೀನಾಯ ಸ್ಥಿತಿ ಬಂದೊದಗಿದೆ. ಕೊರೊನಾ ಲಾಕ್‌ಡೌನ್ ದಿಂದಾಗಿ ಇಡೀ ವಾಡಿ ಪಟ್ಟಣದ ಕೂಲಿಕಾರ್ಮಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಗಣಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹೋಟೆಲ್-ಖಾನಾವಳಿ ಕೆಲಸದಾಳುಗಳು, ಕೃಷಿ ಕೂಲಿ ಕಾರ್ಮಿಕರು, ಚಾಲಕರು, ಹಮಾಲಿಗಳು, ಚರ್ಮ ಕೆಲಸಗಾರರು, ನಾಯಿಂದರು, ಪಾನ್ ಬೀಡಾಗಳ ಗೂಡಂಗಡಿ ವ್ಯಾಪಾರಿಗಳು, ಮನೆಗೆಲಸದ ಮಹಿಳೆಯರು ಹೀಗೆ ವಿವಿಧೆಡೆ ಕೆಲಸದಲ್ಲಿದ್ದ ಬಡ ಕುಟುಂಬಗಳು ತುತ್ತು ಕೂಳಿಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ಶಂಕರ ಜಾಧವ, ಕೂಡಲೇ ಎಸಿಸಿ ಕಂಪನಿ ಮಧ್ಯೆ ಪ್ರವೇಶ ಮಾಡುವ ಮೂಲಕ ವಾಡಿ ಪುರಸಭೆ ವ್ಯಾಪ್ತಿಯ ಸೀಲ್‌ಡೌನ್ ಏರಿಯಾಗಳನ್ನು ಸೇರಿದಂತೆ ಎಲ್ಲಾ ೨೩ ವಾರ್ಡ್‌ಗಳ ಜನರ ಮನೆ ಬಾಗಿಲಿಗೆ ಆಹಾರದ ಕಿಟ್ ವಿತರಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಇಂಹದ ಸಂಕಟದ ಸಂದರ್ಭದಲ್ಲಿ ಕಂಪನಿ ಜನರ ಕಣ್ಣೀರು ಒರೆಸಲು ಮುಂದಾಗದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿಮೆಂಟ್ ನಗರಿ ವಾಡಿ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಲ್ಲಿ ಹೆರಿಗೆ ಸೌಲಭ್ಯವಿದ್ದು, ಅಲ್ಲಿನ ಆರೋಗ್ಯ ಸಿಬ್ಬಂದಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಕಡಿತುಂಟಾದರೆ ವಿವಿಧ ಗ್ರಾಮಗಳಿಂದ ಬರುವ ಮಹಿಳೆಯರ ಹೆರಿಗೆ ಮಾಡಲು ಕಷ್ಟವಾಗುತ್ತಿದೆ. ಜನರೇಟರ್ ಸೌಲಭ್ಯವಿಲ್ಲ. ಇನೈಟರ್ ಅಳವಡಿಸಲಾಗಿದ್ದು, ಅದು ಕೆಟ್ಟು ಹಲವು ತಿಂಗಳುಗಳಾಗಿವೆ. ರಿಪೇರಿ ಮಾಡಿಸುವ ಗೋಜಿಗೆ ಆರೋಗ್ಯಾಧಿಕಾರಿಗಳು ಮುಂದಾಗಿಲ್ಲ. ರಾತ್ರಿ ವೇಳೆ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಬೇಕಾದ ದುಸ್ಥಿತಿ ಎದುರಾಗಿದೆ. ಕೂಡಲೇ ಸರಕಾರಿ ಆಸ್ಪತ್ರೆಗೆ ಇನ್ವೈಟರ್ ಅಥವ ಜನರೇಟರ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular