ಇಂದಿನ ತೋಟಗಾರಿಕಾ ಸಚಿವ ಶ್ರೀ ಎಂ.ಸಿ. ಮನಗೂಳಿ ಅರ್ಧ ಶತಮಾನದಷ್ಟು ಹಿಂದೆ ( 1962) ಸರ್ಕಾರ ತನಗೆ ನೀಡಿದ ಗ್ರಾಮ ಸೇವಕ ನೌಕರಿ ಮಾಡಲು ತಮ್ಮ ಇಂಗ್ರೇಜಿ ನೆಲ, ಸಿಂದಗಿಯಿಂದ ಎಂಟು ಹರದಾರಿ ದೂರದ ಅಂದಿನ ಜೇವರ್ಗಿ ತಾಲೂಕಿನ ಮೊಗಲಾಯಿ ಪ್ರಾಂತ್ಯದ ಉರ್ದು ಮೋಡಿಯ ನಾಡು ಕಡಕೋಳಕ್ಕೆ ಬರುತ್ತಾರೆ. ಅದು ಅನುಭಾವದ ಹರಿಕಾರ ಕಡಕೋಳ ಮಡಿವಾಳಪ್ಪನವರು ಬಾಳಿ ಬದುಕಿದ ತತ್ವ ಜ್ಞಾನ ಪದಗಳ ಆಡುಂಬೊಲ., ಆ ನೆಲ.
ಅದೇ ಆಗ ಆರಂಭಗೊಂಡಿದ್ದ ಗ್ರಾಮ ಪಂಚಾಯ್ತಿಗೆ ಊರ ಪೋಲೀಸಗೌಡ ಅಧ್ಯಕ್ಷ. ಕವಲ್ದಾರ ಓಣಿಯ ನಾಯ್ಕೋಡಿ ಭೀಮರಾಯನ ಮನೆಯೇ ಗ್ರಾ.ಪಂ. ಕಚೇರಿ. ಮುವತ್ತರ ಆಸು ಪಾಸಿನ ಮನಗೂಳಿ, ಗ್ರಾ.ಪಂ. ಅಧ್ಯಕ್ಷ ಶ್ರೀ ಹಳ್ಳೆಪ್ಪಗೌಡ ಹಣಮಂತ್ರಾಯಗೌಡ ಪೊಲೀಸ ಪಾಟೀಲ ( ಹ.ಹ.ಪೋ.ಪಾ.) ರ ಬಳಿ ಒಂದರ್ಥದಂತೆ ಡ್ಯೂಟಿ ರಿಪೋರ್ಟ ಮಾಡಿಕೋತಾರೆ.
ಇಂಗ್ರೇಜಿ ( ಬ್ರಿಟಿಷ್ ಆಳ್ವಿಕೆಯ ಮುಂಬೈ ಕರ್ನಾಟಕ ) ಯ ಶಿಕ್ಷಣ … ರ ಠ ಈ ಕ ಗ … ಕಲಿತು ಬಂದವರು ಮನಗೂಳಿ. ದಖನಿ, ಉರ್ದು ಪ್ರಾಬಲ್ಯದ ಮೋಡಿ ಲಿಪಿಯಂಥ ಬರವಣಿಗೆ ಕಡು ಕಷ್ಟವಾಗ್ತದೆ. ಆದಾಗ್ಯೂ ಹ.ಹ.ಪೋ.ಪಾ. ರೊಂದಿಗೆ ವರ್ಷವೊಪ್ಪತ್ತು ನಿಭಾಯಿಸುತ್ತಾರೆ.
ಹಣಮಂದೇವರ ಗುಡಿ ಬಾಜೂಕೆ ಚಂದ್ರಸಾಲೀ, ಸಿರೆಪ್ಪನ ಕಟ್ಟೆ ಹತ್ತಿರ ಕೊಂಡವಾಡೆ ಕಟ್ಟಿಸುತ್ತಾರೆ. ಕಾರಣಾಂತರಗಳಿಂದ ಗ್ರಾ.ಪಂ. ಕಚೇರಿ ಪಾಟೀಲರ ವಾಸದ ಮನೆಗೆ, ಆ ನಂತರ ಚಂದ್ರಸಾಲಿಗೆ ಸ್ಥಳಾಂತರ. ಅಷ್ಟೊತ್ತಿಗೆ ಗ್ರಾ.ಪಂ. ಗೆ ಗ್ರಾಮೋಫೋನ್, ರೇಡಿಯೋ ಬಂತು.
ಸುತ್ತ ಹತ್ತಾರು ಹಳ್ಳಿಯ ಮಂದಿಗೆ ಅದು ಆ ಕಾಲದ ಪವಾಡ ಸದೃಶ ಅಚ್ಚರಿ. ಕೆಲ ಕಾಲದ ನಂತರ ಮನಗೂಳಿ ವರ್ಗವಾಗಿ ಹೋಗುತ್ತಾರೆ. ಮನಗೂಳಿ ಶಾಸಕರಾದಾಗೆಲ್ಲ ಮಂತ್ರಿಯಾದ ಎರಡನೇ ಬಾರಿಯೂ ಈ ನೆನಪುಗಳನ್ನು ಕಡಕೋಳಕ್ಕೆ ಬಂದಾಗೆಲ್ಲ ನೆನಪಿಸಿಕೊಳ್ಳದೇ ಇರಲಾರರು. ಹೌದು ಕಡಕೋಳದ ಮೇಲಿನ ಅವರ ಪ್ರೀತಿ ಅನನ್ಯವಾದುದು. ಜಾತ್ರೆಗೆ ಬರುವುದನ್ನು ಯಾವತ್ತೂ ತಪ್ಪಿಸಿಲ್ಲ. ಮೊನ್ನೆ ಜಾತ್ರೆಗೆ ಬಂದಾಗ ಶ್ರೀ ಮಠಕ್ಕೆ ಹೆಬ್ಬಾಗಿಲು ಕಟ್ಟಿಸಲೆಂದು ಹತ್ತು ಲಕ್ಷ ರುಪಾಯಿ ನೀಡುವ ವಾಗ್ದಾನ ಮಾಡಿದರು.
ಇಂತಹ ಅನೇಕ ಅನ್ಯಾದೃಶ ನೆನಪುಗಳನ್ನು ತಮ್ಮ ಭಾವಕೋಶದಲ್ಲಿ ಜತನವಿರಿಸಿಕೊಂಡಿರುವ ನೂರು ವಸಂತಗಳ ಆಜೂ ಬಾಜಿನ ಶ್ರೀ ಹ.ಹ.ಪೋ.ಪಾಟೀಲರು,. ನಿಷ್ಪತ್ತಿ ಹಣ್ಣು ಹಣ್ಣಾಗಿದ್ದಾರೆ. ಅವರ ನೆನಪಿನ ಶಕ್ತಿ ಕುಂದಿಲ್ಲ.