ನಾಳೆ ಗೃಹಜ್ಯೋತಿ ಯೋಜನೆ ಕಲಬುರಗಿಯಿಂದ ಚಾಲನೆ; ಸಚಿವ ಪ್ರಿಯಾಂಕ್ ಖರ್ಗೆ

0
15

ಕಲಬುರಗಿ: ಕಳೆದ‌ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಜನರ ಬೇಡಿಕೆ ಕೇಳಿದ ನಂತರ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆ ತಯಾರಿಸಿತ್ತು. ಜೊತೆಗೆ ಆರ್ಥಿಕ ಸ್ಥಿರತೆ ಕೊಡುವ ಉದ್ದೇಶದಿಂದ ಐದು ಪ್ರಮುಖ ಗ್ಯಾರಂಟಿಗಳನ್ನು ಕೂಡಾ ಘೋಷಿಸಲಾಯಿತು. ಅದರಂತೆ ಒಂದೊಂದೆ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದ್ದು, ಗೃಹ ಜ್ಯೋತಿ ಯೋಜನೆ ನಾಳೆ ಕಲುಬುರಗಿಯಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾಧಿಕಾರಿ‌ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು. ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 1,41,23,240 ಫಲಾನುಭವಿಗಳು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 4,69,029 ಫಲಾನುಭವಿಗಳು ನೋಂದಾಯಿಸಿದ್ದಾರೆ ಎಂದರು.

Contact Your\'s Advertisement; 9902492681

ಪ್ರತಿಯೊಂದು ಗ್ಯಾರಂಟಿಗಳು ಕೂಡಾ ಪ್ರಮುಖ ಯೋಜನೆಗಳಾಗಿವೆ. ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಗೊಳ್ಳುವ ಹಂತದಲ್ಲಿದ್ದು ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಯುವನಿಧಿ ಯೋಜನೆ ಈ ಸಲದ ಶೈಕ್ಷಣಿಕ ವರ್ಷ ಮುಗಿದ ನಂತರ ಜಾರಿಯಾಗಲಿದೆ. ನಾವು ಭಾಷೆ ಕೊಟ್ಟಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ. ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ‌ ಅಸಹನೀಯವಾಗಿದೆ ಎಂದು ದೂರಿದರು.

ಗೃಹ ಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,‌ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ ಹಾಗೂ‌ ಇಂಧನ ಸಚಿವ‌ ಕೆ.ಜೆ. ಜಾರ್ಜ್ ಸೇರಿದಂರೆ ಹಲವರು ಉಪಸ್ಥಿತರಿರುತ್ತಾರೆ. ಈ ಸಭೆಗೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಸಮಾರಂಭದಲ್ಲಿ 10 ಜನರಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಕೊಡಲಾಗುವುದು. ಈ ಯೋಜನೆ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು‌ ಸಚಿವರು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ‌ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಜನರಿಗೆ ಅಗತ್ಯ ಯೋಜನೆಗಳ ಜಾರಿಗೆ ಬೇಕಾಗವಷ್ಟು ಅನುದಾನವನ್ನು ಈಗಾಗಲೇ ತೆಗೆದಿರಿಸಲಾಗಿದ್ದು ಯಾವುದೇ ಪ್ರಮುಖ ಯೋಜನೆಗಳಿಗೆ ಗ್ಯಾರಂಟಿಗಳಿಂದ ಆರ್ಥಿಕವಾಗಿ ತೊಂದರಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಹಾನಿಗೊಳಗಾದ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ‌ ಮಾಡುವುದರ ಜೊತೆಗೆ ಶಾಲೆಗಳಿಗೆ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸಲು ಸರ್ಕಾರ ಸಿದ್ದವಾಗಿದೆ ಎಂದು ಖರ್ಗೆ ಹೇಳಿದರು.

ವಿದ್ಯುಚ್ಛಕ್ತಿ ಕಂಪನಿಗಳಿಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಬಾಕಿ ಬರಬೇಕಿದ್ದು ಹಾಗೆ ಉಳಿದಿದೆ ಇದು ಗ್ಯಾರಂಟಿ‌ ಯೋಜನೆ ಸಮರ್ಪಕ ಜಾರಿಗೆ ಅನಾನುಕೂಲವಾಗಲಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸರ್ಕಾರ ಇತರೆ ಇಲಾಖೆಗಳಿಂದ ಬರಬೇಕಾಗುವ ಬಾಕಿಯನ್ನು ಹಂತ ಹಂತವಾಗಿ ವಸೂಲಿ ಮಾಡುವುದರ ಜೊತೆಗೆ ಬದಲಿ ವ್ಯವಸ್ಥೆಯ ಮೂಲಕ ರೆವೆನ್ಯೂ ಸಂಗ್ರಹಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಇತ್ತೀಚಿಗೆ ಮಳೆ‌ಬಂದ ಸಂದರ್ಭದಲ್ಲಿ ನೀರಿನ‌ ಕುಳಿಗಳಲ್ಲಿ ಬಿದ್ದು ಇಬ್ಬರು ಬಾಲಕರು‌ ಮುಳುಗಿ ಮೃತರಾಗಿರುವುದು ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿ ಹಾಗೂ ಕಾರ್ಪೊರೇಷನ್ ಜೊತೆಗೆ ನಾನೂ ಕೂಡಾ ಜವಾಬ್ದಾರನಾಗಿದ್ದೇನೆ. ಈ ಬಗ್ಗೆ ಮೃತರ‌ ಕುಟುಂಬದವರಿಗೆ ಸಾಂತ್ವನ ಹೇಳಿ ಎಲ್ ಅಂಡ್ ಟಿ ಕಂಪನಿಯ ಕಡೆಯಿಂದ ಪರಿಹಾರ‌ ಕೊಡಿಸಲಾಗಿದೆ. ಜೊತೆಗೆ ಇತರೆ ಸರ್ಕಾರಿ ಕಾಮಗಾರಿ‌ ನಡೆಯುತ್ತಿರುವ ಕಡೆಗೆ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸೀಲ್ ಮಾಡಿರುವ ಪ್ರತಿ ಗ್ಯಾಸ್ ಸಿಲೆಂಡರ್ ನಿಂದ ಕನಿಷ್ಠ 2 ಕೆಜಿಯಷ್ಟು ಅನಿಲವನ್ನು‌ ತೆಗೆದು‌ ಮನೆಗಳಿಗೆ ಸರಬರಾಜು ಮಾಡುತ್ತಿರುವ ಘಟನೆ ತಮ್ಮ ಗಮನಕ್ಕೆ‌ ಬಂದಿದ್ದು ಸಿಎಂ ಅವರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅಫಜಲ್ ಪೂರ ತಾಲೂಕಿನ ಅವರಾದ ( ಕೆ) ಗ್ರಾಮವನ್ನು ನೆರೆ ಪೀಡಿತ ಗ್ರಾಮ ಎಂದು ಪರಿಗಣಿಸಿ ಸ್ಥಳಾಂತರ ಮಾಡಲಾಗಿದೆ ಆದರೆ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಶಾಸಕರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ ಎಂದು ತಿರುಗೇಟು ನೀಡಿದ ಸಚಿವರು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನಾನು ಆ ಸರ್ಕಾರದಲ್ಲಿ ಸಚಿವನಾಗಿದ್ದೆ. ಅವರು ಪ್ರೋಗ್ರೆಸ್ಸಿವ್ ಆಗಿ ಮಾತನಾಡುತ್ತಿದ್ದವರು ಈಗ ಯಾಕೆ ಹೀಗಾಗಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಹಾಗೂ ಜೆಡಿಎಸ್ ಗೆ ಇಲ್ಲ. ಅವರ ಬಳಿ ಇರುವ ಪೆನ್ ಡ್ರೈವ್ ಏನಾಗಿದೆ ? ಅದು ಎಸ್ ಪಿ ರೋಡ್ ಪೆನ್ಡ್ರೈವ್ ಇರಬೇಕು ಎಂದು ಕಟಕಿಯಾಡಿದರು.

ಶಾಸಕ ಬಸವರಾಜ ರಾಯರೆಡ್ಡಿ ಅವರ ಸಚಿವರ ಹಾಗೂ ಶಾಸಕರ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಅವರು ಹಿರಿಯರು ಯಾಕೆ ಹೀಗೆ ಹೇಳಿದರು ಗೊತ್ತಾಗುತ್ತಿಲ್ಲ‌ ನಾನು ಸಚಿವನಾಗಿ ಅವರು ಹೇಳಿದ ಕೆಲಸ ಮಾಡಿಕೊಟ್ಟಿದ್ದೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯಿಂದಾಗಿ ಅವರ ಮೇಲಿನ ಗೌರವ ಕಡಿಮೆಯಾಗಿದೆ ಎಂದು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಕೇಶವ ಕೃಪಾದ ಹೇಳಿಕೆ. ಅವರ ಹೇಳಿಕೆ ಆರ್ ಎಸ್ ಎಸ್ ಹೇಳಿಕೆಯಾಗಿದೆ.ದಲಿತರ ಮೇಲಿನ ಬಿಜೆಪಿಯ ಅಸಹನೆಯಾಗಿದೆ. ಈ ಅಸಹನೆ ಬಹಳ ದಿನ ಉಳಿಯುವುದಿಲ್ಲ ಯಾಕೆಂದರೆ, ರಾಜ್ಯದಲ್ಲಿ ಕೇಶವ ಕೃಪಾ ಆಳುತ್ತಿಲ್ಲ. ಬಾಬಾಸಾಹೇಬರ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿದೆ. ಅರಗ ಅವರ ಕ್ಷಮೆ ನಮಗೆ ಬೇಕಿಲ್ಲ. ಕ್ಷಮೆ ಕೇಳಿದ ತಕ್ಷಣ ಮನಸ್ಥಿತಿ ಬದಲಾಗುತ್ತದೆಯೇ? ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ ಕಾನೂನು ಪ್ರಕಾರ ಅದು ಮುಂದುವರೆಯಲಿದೆ ಎಂದು ತಿರುಗೇಟು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here