ಕಲಬುರಗಿ; ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲವಾರ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಾಣೆ ಮಾಡುತ್ತಿದ್ದ 6,37,670 ರೂ. ಮೌಲ್ಯದ 114.71 ಗ್ರಾಂ ಚಿನ್ನ, 3.289 ಕೆ.ಜಿ ಬೆಳ್ಳಿಯನ್ನು ಎಸ್.ಎಸ್.ಟಿ ತಂಡ ವಶಕ್ಕೆ ಪಡೆದಿದೆ.
ಯಾದಗಿರಿಯಿಂದ ಕಲಬುರಗಿ ಕಡೆ ಹೊರಟಿದ್ದ ಸಾರಿಗೆ ಬಸ್ ಸಂಖ್ಯೆ ಕೆ.ಎ-32 ಎಫ್- 2369 ರಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದ ಹುಸನಪ್ಪ ಶರಣಪ್ಪ ಬೈಲ್ ಪತ್ತಾರ ಅವರು ಸಾಗಿಸುತ್ತಿದ್ದ ಬೆಳ್ಳಿ-ಬಂಗಾರವನ್ನು ಸೆಕ್ಟರ್ ಅಧಿಕಾರಿಗಳು ವಶಕ್ಕೆ ಪಡೆದು ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲಾ ಹಣಕಾಸು ಮುಟ್ಟುಗೋಲು ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.