ವೇದಶಾಸ್ತ್ರ ಸುಳ್ಳು, ಬಯಲು ಜ್ಞಾನ ನಿಜ

2
440

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿಯ ಅಲ್ಲಮಪ್ರಭುಗಳು ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷರಾಗಿದ್ದರು. ಶೂನ್ಯ ಎಂದರೆ ಒಂದರ್ಥದಲ್ಲಿ ಸೊನ್ನೆ. ಇನ್ನೊಂದರರ್ಥದಲ್ಲಿ ಎಲ್ಲವನ್ನು ಒಳಗೊಂಡಿರುವುದು. ಹಾಗೆ ನೋಡಿದರೆ ಈ ಬದುಕು ಒಂದರ್ಥದಲ್ಲಿ ಬಯಲು. ಬಯಲೊಳಗೆ ಬಯಲಾಗುವುದೇ ನಿಜವಾದ ಮುಕ್ತಿ ಎಂದು ಆ ಮುಕ್ತಿ ಪದವಿಯನ್ನು ಕರುಣಿಸಿದ ಅಲ್ಲಮರು ಅಧ್ಯಾತ್ಮದ ಶಿಖರವನ್ನೇರಿದವರು.

ಅನುಭವ ಮಂಟಪಕ್ಕೆ ಪ್ರವೇಶ ಪಡೆಯುವ ಪ್ರತಿಯೊಬ್ಬರೂ ಅಲ್ಲಮನ ಕುಲುಮೆಯಲ್ಲಿ ಬೇಯುವುದು ಪದ್ಧತಿಯಾಗಿತ್ತು. ಬಸವನ ಕೀರ್ತಿವಾರ್ತೆ ಕೇಳಿ ನಾಡಿನ ಮೂಲೆ ಮೂಲೆಗಳಿಂದ ಬಂದರೆಲ್ಲರೂ ಅಲ್ಲಮನು ಒಡ್ಡುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕಾಗಿತ್ತು. ಇಲ್ಲದಿದ್ದಲ್ಲಿ ಅನುಭವ ಮಂಟಪದಲ್ಲಿ ಪ್ರವೇಶವಿರಲಿಲ್ಲ. ಇಂತಹ ನಿರಹಂಕಾರಿ ಪ್ರಭುಗಳು ಆತ್ಮವನ್ನು ಕುರಿತು ಎಷ್ಟು ಅದ್ಭುತವಾಗಿ ವಚನ ರಚನೆ ಮಾಡಿದ್ದರೋ ಅದಕ್ಕಿಂತಲೂ ಮಿಗಿಲಾಗಿ ಈ ಬದುಕನ್ನು ಕುರಿತು ಕೂಡ ವಚನ ರಚನೆ ಮಾಡಿರುವುದನ್ನು ನಾವು ಕಾಣಬಹುದಾಗಿದೆ.

Contact Your\'s Advertisement; 9902492681

ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರ್ರವೆಂಬ ನೇಣ ಕಟ್ಟಿ
ಹಿಡಿದು ತೂಗಿ ಜೋಗುಳವ ಹಾಡುತ್ತಿದ್ದಾಳೆ
ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು
ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ
ಲಿಂಗವ ಕಾಣಬಾರದು

ಹುಟ್ಟಿದ ಮಗುವನ್ನು ತೊಟ್ಟಿಲೊಳಗೆ ಹಾಕಿ ತಾಯಿಯಾದಾಕೆ ಜೋಗುಳ ಹಾಡುವುದು ಸಾಮಾನ್ಯ. ಮಗುವನ್ನು ಸಮಾಧಾನಪಡಿಸಲು ಇಲ್ಲವೇ ಮಲಗಿಸಲು ತಾಯಿಯಾದವಳು ಜೋಗುಳದ ಹಾಡು ಹಾಡಿ ಮಗುವನ್ನು ಮಲಗಿಸುತ್ತಾಳೆ. ಆ ಮೂಲಕ ಮುಂದೆ ಮಗುವಿನ ಬೆಳವಣಿಗೆ ಕಾಣಬಹುದು ಎಂಬುದು ಲೋಕನೀತಿ. ತೊಟ್ಟಿಲು, ತೊಟ್ಟಿಲಿಗೆ ಕಟ್ಟುವ ಹಗ್ಗ, ತಾಯಿಯ ತೂಗುವಿಕೆ ಎಂಬುದು ಕೇವಲ ಸಾಂಕೇತಿಕ. ಈ ಸಂಕೇತಗಳನ್ನು ಬಳಸಿ ಅಲ್ಲಮಪ್ರಭುಗಳಿಗೆ ಬೇರೆ ಏನನ್ನೋ ಹೇಳಬೇಕಿದೆ ಎಂಬುದು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕಟ್ಟಿರುವ ತೊಟ್ಟಿಲು ಅಜ್ಞಾನದ ತೊಟ್ಟಿಲು. ತೊಟ್ಟಿಲಲ್ಲಿ ಮಲಗಿರುವುದು ಜ್ಞಾನ ಎನ್ನುವ ಶಿಶು. ಕಟ್ಟಿರುವ ಹಗ್ಗ ನೇಣು ಕುಣಿಕೆ. ಆದರೂ ತಾಯಿಯಾದವಳು ತನ್ನ ಮಗುವನ್ನು ಜೋಪಾನ ಮಾಡುವ ಭ್ರಾಂತಿ ಹೊಂದಿದ್ದಾಳೆ. ಇದು ಹೇಗೆ ಸಾಧ್ಯ? ಎಂದು ನಮ್ಮ ಮೌಢ್ಯತೆಯನ್ನು, ಅಂಧಾನುಕರಣೆಯನ್ನು ಪ್ರಶ್ನಿಸುವ ಅಲ್ಲಮರು ವೇದ-ಶಾಸ್ತ್ರಗಳೆಂಬವು ನೇಣಿಗೆ ಸಮ ಎಂದು ಅಭಿಪ್ರಾಯಪಡುತ್ತಾರೆ. ವಿಪ್ರರು ನುಡಿದಂತೆ ನಡೆಯರು. ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ. ಇವರನ್ನು ನೆಚ್ಚಿಕೊಂಡು ಅವರು ಹೇಳುವ ವೇದ-ಶಾಸ್ತ್ರಗಳನ್ನು ಕೇಳುವುದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

ಇಂತಹ ಅಜ್ಞಾನದ ತೊಟ್ಟಿಲು ಹರಿಯಬೇಕಾದರೆ ಜ್ಞಾನವೆಂಬ ಶಿಶು ಹಾಗೂ ಅದನ್ನು ತೂಗಿ ಜೋಗುಳ ಹಾಡುವ ಸಮಾಜವೆಂಬ ತಾಯಿ ಜಾಗೃತವಾಗಬೇಕು. ಅಂದರೆ ನಾವು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಮೇಲೆ ಸವಾರಿ ಮಾಡುವುದು ನಿಲ್ಲುವುದಿಲ್ಲ ಎಂಬುದನ್ನು ಅವರು ಈ ವಚನದಲ್ಲಿ ಸೂಚ್ಯವಾಗಿ ಹೇಳುತ್ತಾರೆ. ಇದರಿಂದ ಪಾರಾಗಿ ಬರಬೇಕಾದರೆ ವೇದ-ಶಾಸ್ತ್ರಗಳ ಆ ಕಟ್ಟು ಕಟ್ಟಳೆಗಳೆಲ್ಲವನ್ನೂ ಮೀರಿ, ಮುರಿದು ಹೊರ ಬರಬೇಕು. ಅಂದಾಗ ಮಾತ್ರ ಉದ್ದಾರವಾಗಲು ಸಾಧ್ಯ ಎಂಬುದನ್ನು ಸೂಕ್ತ ಉದಾಹರಣೆ ಮೂಲಕ ಅವರು ಈ ವಚನದಲ್ಲಿ ತಿಳಿಸಿದ್ದಾರೆ.

ಬಳ್ಳಿಗಾವಿ ಗ್ರಾಮದ ಒಂದು ನೋಟ

ಜನ್ಮತಃ ಯಾರೂ ಅಜ್ಞಾನಿಗಳಾಗಿರುವುದಿಲ್ಲ. ಆತನ ಸುತ್ತಲಿನ ಪರಿಸರ ಹಾಗೂ ಪ್ರಭಾವಗಳು ಮನುಷ್ಯನನ್ನು ಮೂಢನನ್ನಾಗಿಸುತ್ತವೆ. ವೇದಾಗಮಗಳ ಸುಳ್ಳು ಶಾಸ್ತ್ರ ಹೇಳಿ ಅದುವರೆಗೂ ಜನರನ್ನು ವಂಚಿಸುತ್ತ ಬಂದಿದ್ದ ಪಟ್ಟಭದ್ರರನ್ನು ಕಂಡಿದ್ದ ಅಲ್ಲಮಪ್ರಭುಗಳು ಅವರಿಂದ ಬಿಡುಗಡೆಗೊಳ್ಳುವ ಸುಲಭ ಮಾರ್ಗವನ್ನು ತೋರಿಸಿದರು. ಮುನುಷ್ಯ ಜ್ಞಾನಿಯಾಗಿದ್ದರೂ ಮಂತ್ರ, ತಂತ್ರ, ಶಾಸ್ತ್ರ, ಪುರಾಣಗಳ ಬೆಲೆಯಲ್ಲಿ ಬಿದ್ದು ಬದುಕನ್ನು ನರಕ ಸದೃಶ ಮಾಡಿಕೊಳ್ಳದೆ ಸುಂದರ, ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕು ಎಂಬುದನ್ನು ಇಲ್ಲಿ ವಿವರಿಸುತ್ತಾರೆ.

ಒಂದೇ ಕಲ್ಲಿನಿಂದ ಎರಡು ಹಕ್ಕಿಗೆ ಹೊಡೆದಂತಿರುವ ಅಲ್ಲಮಪ್ರಭುಗಳ ಈ ವಚನವು ಒಂದು ಕಡೆ ಶಾಶ್ವತವಾದ ಜ್ಞಾನವನ್ನು ಪಡೆದುಕೊಳ್ಳವುದು ಮುಖ್ಯ ಎಂದು ಹೇಳುವುದರ ಜೊತೆಗೆ ಜನರನ್ನು ವಂಚಿಸುವ ಆ ವಂಚಕರ ಮಾತುಗಳನ್ನು ಕೇಳಲೇಬಾರದು. ಸ್ವರ್ಗ-ನರಕ, ಪಾಪ-ಪುಣ್ಯ, ವ್ರತ-ನೇಮಗಳೆಂದು ಹೇಳಿಕೊಂಡು ನಮ್ಮಲ್ಲಿನ ಭಯವನ್ನೇ ತನ್ನ ಬದುಕಿನ ಬಂಡವಾಳ ಮಾಡಿಕೊಂಡು ಮೋಸಗೊಳಿಸುವವರಿಂದ ಎಚ್ಚರಿಕೆಯಿಂದ ಇರಬೇಕು. ಸ್ವರ್ಗ-ನರಕಗಳು ಬೇರಿಲ್ಲ. ಪಾಪ-ಪುಣ್ಯವೆಂಬವು ಬೇರಿಲ್ಲ. ವ್ರತ-ನೇಮಾಚರಣೆಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಯೋಗಾತ್ಮಕವಾಗಿ ತೋರಿಸಿಕೊಟ್ಟರು.

ಯಾವುದೇ ವಸ್ತು ಉಪಯೋಗಿಸದಿದ್ದರೆ ಅದು ಬಿದ್ದಲ್ಲಿಯೇ ಕೆಟ್ಟು, ಕೊಳೆತು ಹೋಗುತ್ತದೆ. ಮನುಷ್ಯ ಬುದ್ಧಿಜೀವಿ. ಯಾರೋ ಹೇಳುತ್ತಾರೆ ಎಂದು ಸುಖಾ ಸುಮ್ಮನೆ ನಂಬಬಾರದು. ಒರೆಗಲ್ಲಿಗೆ ಹಚ್ಚಿ ತಿಕ್ಕಿ ನೋಡಿದಾಗ ಮಾತ್ರ ಅಪ್ಪಟ ಚಿನ್ನ ಯಾವುದು? ನಕಲು ಚಿನ್ನ ಯಾವುದು ಎಂಬುದು ಗೊತ್ತಾಗಬಲ್ಲುದು. ಹೀಗಾಗಿ ನಮ್ಮಲ್ಲಿರುವ ಬುದ್ಧಿಶಕ್ತಿ, ಜ್ಞಾನವನ್ನು ಉಪಯೋಗಿಸಿಕೊಂಡು ಬದುಕು ಸಾಗಿಸಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ.

2 ಕಾಮೆಂಟ್ಗಳನ್ನು

  1. ವೇದಾಗಮಗಳಲ್ಲಿ ನಿರಸತೆಯನ್ನು ಕಂಡು ಅಲ್ಲಮಪ್ರಭುಗಳು ಅದನ್ನು ನೇಣಿಗೆ ಹೊಲಿಸಿದ್ದಾರೆ ನೇಣಹರಿದು ತೊಟ್ಟಿಲು ಮುರಿದು ಬ್ರಾಂತಿಯಜೊಗುಳ ನಿಲ್ಲಬೆಕೆಂದು ಕರೆ ಕೊಟ್ಟಿದ್ದಾರೆ. ಅವರಮಾತಿನಲ್ಲಿ ಅಜ್ಞಾನತೊಲಗುವದಾರಿ ಇದೆ ಅದುವೆ ನಿಜವಾದ ಜ್ಞಾನದ ಬೆಳಕು.ಇಲೇಖನಮೂಲಕ ಜನತೆಗೆ ಬೆಳಕನ್ನ ತೊರಿಸಿದ್ದಿರಿ ಶರಣಾರ್ಥಿಗಳು.

  2. ವೇದಾಗಮಗಳಲ್ಲಿ ನಿರಸತೆಯನ್ನು ಕಂಡು ಅಲ್ಲಮಪ್ರಭುಗಳು ಅದನ್ನು ನೇಣಿಗೆ ಹೊಲಿಸಿದ್ದಾರೆ ನೇಣಹರಿದು ತೊಟ್ಟಿಲು ಮುರಿದು ಬ್ರಾಂತಿಯಜೊಗುಳ ನಿಲ್ಲಬೆಕೆಂದು ಕರೆ ಕೊಟ್ಟಿದ್ದಾರೆ. ಅವರಮಾತಿನಲ್ಲಿ ಅಜ್ಞಾನತೊಲಗುವದಾರಿ ಇದೆ ಅದುವೆ ನಿಜವಾದ ಜ್ಞಾನದ ಬೆಳಕು. ಈ ಲೇಖನ ಮೂಲಕ ಜನತೆಗೆ ಬೆಳಕನ್ನ ತೊರಿಸಿದ್ದಿರಿ ಶರಣಾರ್ಥಿಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here