ಕಲಬುರಗಿ: ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ನೀಗಿಸಲು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 1 ಟಿ.ಎಂ.ಸಿ. ನೀರು ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಜೀವನಾಡಿ ಭೀಮಾ ನದಿಯು ನೀರಿಲ್ಲದೇ ಬತ್ತಿ ಹೋಗಿದ ಪರಿಣಾಮ ಹಾಗೂ ನಾರಾಯಣಪುರ ಜಲಾಶಯದಲ್ಲಿಯೂ ನೀರಿನ ಲಭ್ಯತೆ ಇರದ ಹಿನ್ನೆಲೆಯಲ್ಲಿ ಜೂನ್ 2019ರ ಮಾಹೆ ವರೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಒಟ್ಟಾರೆ 1.25 ಟಿ.ಎಂ.ಸಿ. ನೀರನ್ನು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಬಿಡುಗಡೆ ಮಾಡುವಂತೆ ಕೋರಲಾಗಿತ್ತು.
ಅದರಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಕಲಬುರಗಿ ಮಹಾನಗರಕ್ಕೆ ನಾರಾಯಣಪುರ ಜಲಾಶಯದಿಂದ ಜೇವರ್ಗಿ ಶಾಖಾ ಕಾಲುವೆ ಮೂಲಕ ಸರಡಗಿ ಬ್ಯಾರೇಜಿಗೆ 0.40 ಟಿ.ಎಂ.ಸಿ. ನೀರು, ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಪಲಕನಮರಡಿ ಮತ್ತು ಇತರೆ ಹತ್ತು ಬಹುಗ್ರಾಮ ಯೋಜನೆ ನೀರಿನ ಕೆರೆಗೆ ನಾರಾಯಣಪುರ ಬಲದಂಡೆ ಕಾಲುವೆ ಮೂಲಕ 0.20 ಟಿ.ಎಂ.ಸಿ. ನೀರು ಹಾಗೂ ಯಾದಗಿರಿ ನಗರ ಮತ್ತು ಗುರುಮಠಕಲ್ ಪಟ್ಟಣಕ್ಕೆ ನಾರಾಯಣಪುರ ಜಲಾಶಯಕ್ಕೆ ಗುರುಸುಣಗಿ ಹತ್ತಿರವಿರುವ ಭೀಮಾ ನದಿ ಬ್ಯಾರೇಜಿಗೆ 0.40 ಟಿ.ಎಂ.ಸಿ. ನೀರು ಸೇರಿದಂತೆ ಒಟ್ಟು 1 ಟಿ.ಎಂ.ಸಿ. ನೀರು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆಗೆ ಕಳೆದ ಮೇ 23 ರಂದೇ ಆದೇಶ ಹೊರಡಿಸಲಾಗಿದೆ. ಈಗಾಗಲೇ ನೀರು ಆಯಾ ಜಿಲ್ಲೆಗಳಿಗೆ ತಲುಪಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಅಭಾವ ನೀಗಿಸಲು ಈ ಹಿಂದೆಯೂ 2019ರ ಫೆಬ್ರವರಿ 20 ರಂದು 0.237 ಟಿ.ಎಂ.ಸಿ. ಹಾಗೂ ಮಾರ್ಚ್ 23 ರಂದು 0.50 ಟಿ.ಎಂ.ಸಿ. ನೀರು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಹರಿದು ಬಿಡಲಾಗಿರುತ್ತದೆ.
ಬರಗಾಲದ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ, ಅಲ್ಲಿಂದ ಕಾಲುವೆಗಳ ಮೂಲಕ ಕಲಬುರಗಿ ನಗರಕ್ಕೆ ನೀರು ಪೂರೈಸುವ ಸರಡಗಿ ಬ್ಯಾರೇಜಿಗೆ ನೀರು ಪೂರೈಕೆಯಾಗುತ್ತಿದೆ. ಅಲ್ಲಿಂದ ನೀರು ಶುದ್ಧೀಕರಿಸಿ ಮಹಾನಗರದ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ.