ಮಾಲೀಕಯ್ಯ ಗುತ್ತೇದಾರ ನಡೆ ಕಾಂಗ್ರೆಸ್ ಕಡೆ? ಲೋಕ ಚುನಾವಣೆಯಲ್ಲಿ ಕದಲ್ ಬದಲ್ ಕವಡೆಕಾಯಿ!

0
96
  • ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರಚಿ ಉಣಿಸಿಲು ಮುಖ್ಯ ಕಾರಣೀಕರ್ತರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಮಾಲಿಕಯ್ಯ ಗುತ್ತೇದಾರ 2024ರ ಲೋಕಸಭೆ ಚುನಾವಣೆಯಲ್ಲಿ ಮರಳಿ ಗೂಡಿಗೆ (ಘರ್ ವಾಪಸಿ) ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಲಿಕಯ್ಯ ಗುತ್ತೇದಾರ ಅವರು ಬಿಜೆಪಿ ಬಿಟ್ಟು ಬರಲು ಹ¯ವಾರು ಪ್ರಮುಖ ಕಾರಣಗಳಿವೆ ಎಂದು ಹೇಳಲಾಗುತ್ತಿದ್ದು, ಮುಖ್ಯವಾಗಿ ಅವರ ಸಹೋದರ ನಿತಿನ್ ಗುತ್ತೇದಾರ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Contact Your\'s Advertisement; 9902492681

ಕಳೆದ ಬಾರಿಯ ಚುನಾವಣೆಯಲ್ಲಿ ಮಾಜಿ ಮಂತ್ರಿಗಳಾದ ಮಾಲಿಕಯ್ಯ ಗುತ್ತೇದಾರ ಹಾಗೂ ಬಾಬುರಾವ ಚಿಂಚನಸೂರ ಇಬ್ಬರೂ ಮಾಜಿ ಸೇರಿ ಖರ್ಗೆ ಹಾಗೂ ಅವರ ಕುಟುಂಬವನ್ನು ವಾಚಾಮಗೋಚರವಾಗಿ ನಿಂದಿಸಿ ರಾಜಕೀಯ ಸೇಡು ತೀರಿಸಿಕೊಂಡು ಸಂಸದ ಡಾ. ಜಾಧವ ಅವರ ಗೆಲುವಿಗೆ ಕಾರಣವಾಗಿದ್ದರು. ಇಷ್ಟೆಲ್ಲ ಮಾಡಿದ್ದರೂ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಗೆ ಅವರು ತೀವ್ರ ಬೇಸರಪಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಅದರಂತೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಂ.ವೈ. ಪಾಟೀಲ ಹಾಗೂ ಸಹೋದರ ನಿತಿನ್ ಗುತ್ತೇದಾರ ಅವರ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಲುಪಿದ್ದು ಕೂಡ ಅವರಿಗೆ ತೀವ್ರ ಅಸಮಾಧಾನ ಕೂಡ ಉಂಟು ಮಾಡಿತ್ತು. ಇಷ್ಟಾದರೂ ಬಿಜೆಪಿಯವರು ಪಕ್ಷದ ಸಂಘಟನೆಗಾಗಿ ರಾಜ್ಯದ ಓಬಿಸಿ ಉಪಾಧ್ಯಕ್ಷ ಸ್ಥಾನ ನೀಡಿ ಕೈ ತೊಳೆದುಕೊಂಡಿತ್ತು ವಿನಃ ಅವರಿಗೆ ಎಂಎಲ್‍ಸಿ ಅಥವಾ ಯಾವುದೇ ನಿಗಮ ಮಂಡಳಿಗಳಿಗೆ ನೇಮಕ ಮಾಡಲಿಲ್ಲ. ಆದರೂ ಲೋಕಸಭೆಯ ಈ ಚುನಾವಣೆಯಲ್ಲಿ ಅನಿವಾರ್ಯವಾಗಿ ಪಕ್ಷದ ಅಭ್ಯರ್ಥಿ ಡಾ. ಉಮೇಶ ಜಾಧವ ಪರವಾಗಿ ಸಾಕಷ್ಟು ಪ್ರಚಾರ ಮಾಡುತ್ತಿದ್ದರು.

ಲೋಕಸಭೆಯ ಚುನಾವಣಾ ಪ್ರಚಾರ ವೇಳೆ ಖರ್ಗೆಯಂತಹ ಹುಲಿಯನ್ನು ಸೋಲಿಸಿರುವಾಗ ಇಲಿಯನ್ನು ಸೋಲಿಸುವುದು ನಮಗೆ ಯಾವ ಲೆಕ್ಕ? (ಈಗಿನ ಕಾಂಗ್ರೆಸ್ ಅಭ್ಯರ್ಥಿ) ಎಂಬಂತಹ ಅನೇಕ ಧೈರ್ಯದ ಮಾತುಗಳನ್ನು ಆಡುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಬಿಜೆಪಿಗೆ ಶಕ್ತಿ ತುಂಬಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕುಟುಂಬದಲ್ಲಿನ ವೈಮನಸ್ಸಿನಿಂದಾಗಿ ರಾಜಕೀಯ ಬದ್ಧ ವೈರಿಯಾಗಿರುವ ಅವರ ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿ ಸೇರಿಸಿಕೊಂಡಿದೆ. ಬಿಜೆಪಿಯವರು ಸೌಜನ್ಯಕ್ಕಾದರೂ ಈ ಬಗ್ಗೆ ನನಗೆ ಮಾತಾಡಿಸಿಲ್ಲ ಎಂದು ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಯಲ್ಲಿ ತಮ್ಮ ಪುತ್ರ ರಿತೇಶ ಗುತ್ತೇದಾರ ಜೊತೆ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಕಲಬುರಗಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ನಾಮಪತ್ರ ಸಲ್ಲಿಸುವ ವೇಳೆ ಕಲಬುರಗಿಗೆ ಆಗಮಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, “ಮಾಲಿಕಯ್ಯ ಗುತ್ತೇದಾರ ನಮ್ಮ ಆತ್ಮೀಯ ಸ್ನೇಹಿತರು. ಬಿಜೆಪಿಯಲ್ಲಿ ಅವರಿಗೆ ಅನ್ಯಾಯವಾಗಿದೆ. ಕೆಲವೊಂದು ಆಂತರಿಕ ವಿಚಾರಗಳನ್ನು ಹೇಳುವುದಕ್ಕಾಗುವುದಿಲ್ಲ” ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಇನ್ನೂ ಗ್ರೀನ್ ಸಿಗ್ನಲ್ ತೋರಿಸಿಲ್ಲ ಎನ್ನಲಾಗುತ್ತಿದೆ.

ಮತ್ತೊಂದು ಮೂಲದ ಪ್ರಕಾರ ಅವರು ಬಿಜೆಪಿ ಬಿಡುವುದಿಲ್ಲ. ಅವರ ಜೊತೆ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಲಿಕಯ್ಯ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಆತ್ಮವಿಶ್ವಾಸವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಪತ್ರಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.

ಆದರೆ ಚುನಾವಣೆಯ ಈ ಸಂದರ್ಭದಲ್ಲಿ ಕದಲ್ ಬದಲ್ ಕವಡೇಕಾಯಿ ಅವರ್ ಬಿಟ್ ಇವರ್ಯಾರು? ಎನ್ನುವಂತೆ ಏನೆಲ್ಲವೂ ಆಗುವ ಸಾಧ್ಯತೆಗಳಿವೆ.

ಮತದಾರರು ಹಾಗೂ ಬೆಂಬಲಿಗರ ಊಹೆ ನಿಜ! ಆದರೆ ನಾವೊಬ್ಬರೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಏ. 15ರಂದು ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.
-ರಿತೇಶ ಗುತ್ತೇದಾರ, ಯುವ ಮುಖಂಡ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here