ಜನರು ಪ್ರಧಾನಿ ಮೋದಿಯವರ ಸುಳ್ಳುಗಳಿಂದ ಬೇಸತ್ತಿದ್ದಾರೆ: ಪರಮೇಶ್ವರ

0
7

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಜೂನ್ 4 ಕ್ಕೆ ದೇಶಾದ್ಯಂತ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಈ ದೇಶದ ಜನರು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಸುಳ್ಳುಗಳಿಂದ ಬೇಸತ್ತಿದ್ದಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲ ಆಗಿದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

Contact Your\'s Advertisement; 9902492681

ರಾಜ್ಯದ 16 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಮತದಾರರು ಮತ ಚಲಾಯಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಮೇ 7ರಂದು ಮೂರನೇ ಹಂತದ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದ್ದು,  ಎಲ್ಲ ವಿದ್ಯಮಾನಗಳನ್ನು ನೋಡಿದರೆ ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಎಸ್.ಐ.ಟಿ ತನಿಖೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್ ನೀಡಲಾಗಿದೆ. ಅವರು ತಮ್ಮ ವಕೀಲರ ಮೂಲಕ ಆರು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಪ್ರಕರಣದ ಸೆಕ್ಷನ್ 41 ಎ ಪ್ರಕಾರ ಹಾಗೆಲ್ಲಾ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ, ಪ್ರಜ್ವಲ್ ಅವರನ್ನು ಅರೆಸ್ಟ್ ಮಾಡಲಾಗುವುದು. ಆರೋಪಿ ನಂಬರ್ ಒನ್ ಆಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಇಂದು ವಿಚಾರಣೆಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಇಂದು ಹಾಜರಾಗದೆ ಹೋದರೆ ಮುಲಾಜಿಲ್ಲದೆ ಅರೆಸ್ಟ್ ಮಾಡಲಾಗುವುದು ಎಂದರು.

ಆರೋಪಿ ಪ್ರಜ್ವಲ್ ಅವರಿಗೆ ಕೇಂದ್ರ ಸರಕಾರವೇ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ನೀಡಿದೆ. ಹೀಗಾಗಿ, ಅವರು ಸಲೀಸಾಗಿ ದೇಶ ಬಿಟ್ಟು ಹೋಗಿದ್ದಾರೆ. ಈಗ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ರದ್ದುಪಡಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಂತ್ರಸ್ತ ಮಹಿಳೆಯರು ಹಾಗೂ ಅವರ ಕುಟುಂಬಗಳಿಗೆ ಸರಕಾರ ರಕ್ಷಣೆ ನೀಡಲಿದೆ. ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಪರಮೇಶ್ವರ ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇದ್ದರು.

ಕೇಂದ್ರಕ್ಕಿಂತಲೂ ನಮ್ಮ ಸರಕಾರ ಬೆಸ್ಟ್: ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಸರಕಾರಕ್ಕಿಂತಲೂ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಕೇವಲ 24 ತಾಸುಗಳಲ್ಲಿ ಸ್ಪಂದಿಸುವ ಪ್ರಮಾಣ ಶೇ.95ರಷ್ಟಿದೆ. ಇದು ನಮ್ಮ ಸರಕಾರದ ಕಾರ್ಯವೈಖರಿಯಾಗಿದ್ದು, ರಾಮೇಶ್ವರಂ ಕೆಫೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ತನಿಖೆ ಆರಂಭಕ್ಕಿಂತಲೂ ಮೊದಲೇ ರಾಜ್ಯದ ಪೊಲೀಸರು ಸಾಕಷ್ಟು ಉತ್ತಮವಾಗಿ ತನಿಖೆ ಕೈಗೊಂಡು ಪುರಾವೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.

ಕೋಟನೂರ್ ಘಟನೆ ಸಿಐಡಿಗೆ ಹಸ್ತಾಂತರ: ಕಲಬುರಗಿಯ ಕೋಟನೂರ್ (ಡಿ) ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಘಟನೆ ಹಾಗೂ ಆ ನಂತರ ಜಾಮೀನು ಪಡೆದ ಆರೋಪಿಗಳ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.

ಈ ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ಇದೇ ಕಾರಣಕ್ಕೆ ಪ್ರಕರಣವನ್ನು ಸಿಐಡಿಗೆ ನೀಡಲು ನಿರ್ಧರಿಸಿದ್ದಾರೆ ಎಂದರು.

ರಾಧಾಕೃಷ್ಣ ಗೆಲುವು ಖಚಿತ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ರಾಧಾಕೃಷ್ಣ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದು, ಅವರ ಮೇಲೆ ಯಾವುದೇ ಆರೋಪಗಳಾಗಲಿ, ಪ್ರಕರಣಗಳಾಗಲಿ ಇಲ್ಲ. ಅವರೊಬ್ಬ ಶುದ್ಧಹಸ್ತ ವ್ಯಕ್ತಿ ಆಗಿರುವುದರಿಂದ ರಾಧಾಕೃಷ್ಣ ಗೆಲುವು ಖಚಿತ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here