ಭಾಲ್ಕಿ “ವಚನ ದರ್ಶನ”

0
7

ಸೋಹಂ ಎಂಬುದದು ಅಂತರಂಗ ಮದ ನೋಡಯ್ಯಾ
ಶಿವೋಹಂ ಎಂಬದದು ಬಹಿರಂಗದ ಮದ ನೋಡಯ್ಯಾ
ಈ ದ್ವಂದ್ವನಳಿದು ದಾಸೋಹಂ ಎಂದೆನಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.

ಕಾಯಕ ಮತ್ತು ದಾಸೋಹ ತತ್ವಗಳು ವಿಶ್ವಗುರು ಬಸವಣ್ಣನವರು ಕೊಟ್ಟ ಬಹುದೊಡ್ಡ ಮೌಲ್ಯಗಳು. ದಾಸೋಹದಲ್ಲಿ ಭಕ್ತಿ ಇದೆ. ಅಹಂ ಅಳಿದು ಶರಣಾಗತಿ ಭಾವ ಬರುತ್ತದೆ. ನಾನು ನನ್ನದು ಎಂಬ ಭಾವ ಇರುವುದಿಲ್ಲ. ಸರ್ವಾರ್ಪಣ ಅರ್ಪಿಸುವುದು ಇದೆ. ಅರ್ಪಿಸುತ್ತ ಅರ್ಪಣ ಮಾಡುತ್ತ ತನ್ನನ್ನೆ ಅರ್ಪಣೆ ಮಾಡಿಕೊಂಡು ಕ್ರಿಯೆಗಳನ್ನು ಮಾಡುತ್ತಾನೆಂಬ ಭಾವ ಶಿವಯೋಗಿ ಸಿದ್ಧರಾಮೇಶ್ವರರು ತಿಳಿಸುತ್ತಾರೆ.

Contact Your\'s Advertisement; 9902492681

ಸೋಹಂ ಎಂಬುದು ಅಂತರಂಗದ ಮದ ಬರಲಿಕ್ಕೆ ಕಾರಣವಾಗಿರುತ್ತದೆ. ಅಹಂಕಾರ ಬರುತ್ತದೆ. ಸೋಹಂ ಎಂದರೆ ಅವನೆ ನಾನು ಎಂದಾಗುತ್ತದೆ. ಅವನೆ ನಾನು ಸತ್ಯವಸ್ತುವೆ ನಾನು ಎನ್ನುತ್ತ ಒಳಗೆ ಅಹಂ ಪ್ರಾರಂಭವಾಗುತ್ತದೆ. ಸೂಕ್ಷ್ಮರೂಪದಲ್ಲಿ ಅಹಂಕಾರ ಬರಲು ಅಂತರಂಗ ವ್ಯಾಪಿಸುತ್ತದೆ.

ಶಿವೋಹಂ ಎಂಬುದು ಬಹಿರಂಗದ ಮದ ನೋಡಯ್ಯ. ಶಿವೋಹಂ ಅಂದರೆ ಶಿವನೆ ನಾನು ಇದರಲ್ಲಿಯೂ ಅಹಂ ಇದೆ. `ಶಿವನೆ ನಾನು, ನಾನು ಶಿವ; ನಾನು ಶಿವ ಶಿವನೇ ನಾನು’ ಎನ್ನುತ್ತ ಬಹಿರಂಗದ ಮದ ಬರಲು ಪ್ರಾರಂಭವಾಗುತ್ತದೆ. ಕೈಯಲ್ಲಿ ತ್ರಿಶೂಲ ಹಿಡಿದು ಜಟೆಕಟ್ಟಿ ಹುಲಿ ಚರ್ಮ ಧರಿಸಿ ನಾನು ಶಿವ ಎಂದು ಬಿಂಬಿಸಿಕೊಂಡು ಅಹಂದಲ್ಲಿ ಮೆರೆಯುವುದು ನೋಡುತ್ತೇವೆ.

ಪಕ್ಕದ ಮಹಾರಾಷ್ಟ್ರದಲ್ಲಿ ಒಬ್ಬರು ಸ್ವಾಮಿಗಳು ಬಂದು ನಾನೇ ದೇವರು ನನ್ನನ್ನೇ ಪೂಜಿಸಿರಿ. ನನ್ನದೆ ಚರಿತ್ರೆ ಓದಿರಿ. ನನ್ನದೆ ನಾಮಸ್ಮರಣೆ ಮಾಡಿರಿ. ನನ್ನದು ಮಾತ್ರ ಭಾವ ಚಿತ್ರ ಇರಲಿ ಬಿಂಬಿಸಿಕೊಂಡು ಹೋದಲ್ಲಿ ಬಂದಲ್ಲಿ ಜನ ಜಂಗುಳಿ ಸೇರಿ ಮೆರವಣಿಗೆ ನಡೆಯುತ್ತಾ ಇದೆ. ದರ್ಶನ ಜಾತ್ರೆ ನಡೆಯುತ್ತಾ ಇದೆ. ಶಿವೋಹಂ ಎಂಬುದು ಬಹಿರಂಗದ ಮದ ಬರಲಿಕ್ಕೆ ಆಸ್ಪದವಾಗುತ್ತದೆ.

ದಾಸೋಹಂ ಭಾವದಲ್ಲಿ ಅಂತರಂಗದ ಮದವೂ ಇಲ್ಲ, ಬಹಿರಂಗದ ಮದವೂ ಇಲ್ಲ. ನದಿ ಸಾಗರಕ್ಕೆ ಸೇರಿರುತ್ತದೆ. ಸಾಗರಕ್ಕೆ ಸೇರಿದ ನಂತರ ನದಿ ಅನ್ನುವುದೇ ಅಳಿದು ಸಾಗರವಾಗುತ್ತದೆ. ನಾ ನನ್ನದು ಅಂತರಂಗದ ಅಹಂ ಬಹಿರಂಗದ ಅಹಂ ಎಲ್ಲವೂ ನಾಶವಾಗಿ ದಾಸೋಹಂವಾಗುತ್ತದೆ.

ಶೂನ್ಯ ಸಂಪಾದನೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಪ್ರಭುದೇವರು ಬಂದ ನಂತರ ಶೂನ್ಯಪೀಠಕ್ಕೆ ಏರಿದ ನಂತರ ಪಾದಪೂಜೆ, ಆರೋಗಣೆ ನಡೆಯುತ್ತದೆ. ಪ್ರಸಾದ ಅರ್ಪಿತವಾಗುತ್ತದೆ. ಪ್ರಭುದೇವರು ಪ್ರಸಾದಕ್ಕೆ ಕುಳಿತಿರುತ್ತಾರೆ. ಬಸವಣ್ಣನವರು ಎಡೆ ಮಾಡುತ್ತಿದ್ದಾರೆ. ದಾಸೋಹದಿಂದ ತಂದಷ್ಟು ಪದಾರ್ಥಗಳು ಕ್ಷಣಾರ್ಧದಲ್ಲಿ ಅರ್ಪಿತವಾಗುತ್ತಿದ್ದವು. ನೂರಾರು ಕಡಾಯಿಗಳಿದ್ದ ಪದಾರ್ಥ ಮುಗಿಯಿತು. ಸಾವಿರಾರು ಜನ ಪ್ರಸಾದ ಸಿದ್ಧಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಪಾತ್ರೆಗಳಿಂದ ತಂದು ಬಡಿಸುತ್ತಿದ್ದಾರೆ. ಕ್ಷಣದಲ್ಲಿಯೆ ಪ್ರಭುದೇವರು ಅರ್ಪಿತ ಮಾಡುತ್ತಾರೆ.

ಪಾತ್ರೆಗಳು ಪೂರ್ತಿ ಖಾಲಿಯಾದವು. ಮಹಾಮನೆಯ ಉಗ್ರಾಣ ತೆಗೆಯಿತು. ಮಹಾಮನೆಯ ಧಾನ್ಯ ಕರಣಿಕ ಸೊಡ್ಡಳ ಬಾಚರಸನನ್ನು ಕರೆಯುತ್ತಾರೆ. ಉಗ್ರಾಣದಲ್ಲಿನ ಲೆಕ್ಕ ಕೇಳುತ್ತಾರೆ. ಹೊಸ ಜೋಳ ಅರವತ್ತು ಲಕ್ಷ ಖಂಡುಗ, ಸಾಲಿಧಾನ್ಯ ಮೂವತ್ತು ಲಕ್ಷ ಖಂಡುಗ, ಗೋದಿ ಹನ್ನೆರಡು ಲಕ್ಷ ಖಂಡುಗ ಕಲೆ ಬತ್ತಿ ಲಕ್ಷ ಖಂಡುಗ, ಹೆಸರು ಮೂವತ್ತು ಲಕ್ಷ ಖಂಡಗು, ನವಣಿ ಹಾರಕ ಬರಗು ಸಾವೆಮಾಷಿಗಳೆಂಬ ಧಾನ್ಯಂಗಳು ಐವತ್ತು ಲಕ್ಷ ಖಂಡಗು ಹೊಸ ಸುಗ್ಗಿ ಈ ವೇಳೆಗೆ ಬಹಬತ್ತ ಅಗಣಿತ ಸೊಡ್ಡಳ ಬಾಚರಸರು ಇವೆಲ್ಲ ತೆಗೆಯುತ್ತಾ ಹೋದಂತೆ ಅಡಿಗೆ ಮಾಡಿದ್ದಾಯಿತು.

ಆದರೆ ಪ್ರಭುದೇವರು ಹಸಿವು ಹಿಂಗಲಿಲ್ಲ. ಉಗ್ರಾಣ ಖಾಲಿಯಾಯಿತು. ಅಡಿಗೆ ಮಾಡುವವರು ದಣಿದರು. ನೀಡುವವರು ದಣಿದರು. ಬಸವಣ್ಣನವರು ಎಚ್ಚರಗೊಂಡರು. ಪ್ರಭುದೇವರಿಗೆ ಶರಣಾರ್ಥಿ ಎಂದು ಸಾಷ್ಟಾಂಗ ಹಾಕಿ `ನಾನೇ ಬೋನ’ ತಮ್ಮನ್ನೇ ತಾವು ಅರ್ಪಿಸಿಕೊಂಡರು.

ಪ್ರಭುದೇವರಿಗೆ ತೃಪ್ತಿಯಾಯಿತು. ಇದರ ತಾತ್ಪರ್ಯ ಎಂದರೆ ದಾಸೋಹಂದಲ್ಲಿ ನಾನು ಎನ್ನುವುದೇ ಅರ್ಪಣವಾಗಿರುತ್ತದೆ. ಸೋಹಂ ಶಿವೋಹಂ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯಾ ಎಂದು ಸಿದ್ಧರಾಮೇಶ್ವರರ ವಾಣಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ದಾಸೋಹ ತತ್ವದಲ್ಲಿ ಬದುಕೋಣ ಬಾಳೋಣ, ಆನಂದಿಸೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here