ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ‘ಹರ್ ಘರ್ ತಿರಂಗ’ ಕ್ಕೆ ಚಾಲನೆ

0
9

ಬೆಂಗಳೂರು: ದೇಶದ 40 ಕೋಟಿ ಮನೆಗಳು ಹಾಗೂ ರಾಜ್ಯದ 1 ಕೋಟಿ 45ಲಕ್ಷ ಮನೆಗಳ ಮೇಲೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಷ್ಟ್ 13 ರಿಂದ 15ರವರೆಗೆ ರಾಷ್ಟ್ರಧ್ವಜ ಹಾರಾಟಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಹರ್ ಘರ್-ತಿರಂಗ್- ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಭವಿಷ್ಯ ನಿರ್ಮಿಸುವ ಯುವಜನರು ಈ ಕಾರ್ಯಕ್ರಮದಲ್ಲಿ ಹೆಚ್ಚು ಸೇರಿದ್ದಾರೆ. ನಾವು ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಆಚರಣೆಯ ಸಂಭ್ರಮದಲ್ಲಿದ್ದೇವೆ. ಪ್ರತಿ ಮನೆಯಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ 3 ದಿನಗಳ ಕಾಲ ರಾಷ್ಟ್ರಧ್ವಜವನ್ನು ಹಾರಾಟ ಮಾಡಬೇಕೆನ್ನುವುದು ರಾಜ್ಯ, ಕೇಂದ್ರ ಸರ್ಕಾರದ ಆಶಯವಾಗಿದೆ. ಸರ್ಕಾರವು ಇದಕ್ಕಾಗಿಯೇ 1.25 ಕೋಟಿ ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸಿದೆ. ಪ್ರತಿ ಗ್ರಾಮ, ಮನೆಗಳಲ್ಲಿ ತ್ರಿವರ್ಣದ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಇದು ವಿಶ್ವವೇ ಬೆರಗಾಗುವಂತಹ ಒಂದು ಅಭೂತ ಪೂರ್ವ ಕಾರ್ಯಕ್ರಮ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಾವು ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ, ಪ್ರಾಣ ತೆತ್ತವರನ್ನು ನೆನೆಯಬೇಕಾದ ಸಮಯ. ಸ್ವಾತಂತ್ರ್ಯ ಯಾರ ಸ್ವತ್ತಲ್ಲ ಪ್ರಾಣತೆತ್ತ ಸಾವಿರಾರು ಅನಾಮಧೇಯ ಸ್ವಾತಂತ್ರ್ಯಹೋರಾಟಗಾರರನ್ನು ನಾವು ಸ್ಮರಿಸಬೇಕು. ಅಲ್ಲದೇ ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ,ಮೈಲಾರ ಮಾದೇವಪ್ಪ, ಸಾವಕಾರ ಚೆನ್ನಯ್ಯ ಹೇಗೆ ಅನೇಕ ಮಹನೀಯರನ್ನು ನಾವು ಇಂದು ನೆನೆಯಬೇಕು . ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸಶಕ್ತ, ಸಂಪತ್ ಭರಿತ, ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಅವರು ರೈತರ, ದೀನ ದುರ್ಬಲರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಮುಂದಿನ 25ವರ್ಷಗಳು ದೇಶಕ್ಕೆ ಅತ್ಯಂತ ಶ್ರೇಷ್ಠ ಕಾಲ, ದೇಶ ಮೊದಲು ಎಂದು ನಾವು ಸ್ವಾರ್ಥ ಸಂಕುಚಿತ ಮನೋಭಾವ ತೊರೆದು ಏಳಿಗೆಗಾಗಿ ಶ್ರಮಿಸಬೇಕು. ಭವ್ಯ ಭಾರತದ ನಿರ್ಮಾಣಕ್ಕೆ ನಾವು ಬೆವರು ನೀಡಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ನಾವು ಇಂದೇ ಪಣ ತೋಡಬೇಕು. ಪ್ರಧಾನಿ ಮೋದಿಯವರು 5 ಟ್ರಿಲಿಯನ್ ಡಾಲರ್ ಆರ್ಥಿಕ ಸಂಗ್ರಹದ ಗುರಿ ಹೊಂದಿದ್ದು, ಕರ್ನಾಟಕವೇ 1  ಟ್ರಿಲಿಯನ್ ಡಾಲರ್ ನೀಡುವ ಸಂಕಲ್ಪ ನಮ್ಮದಾಗಿದೆ ಎಂದರು.

ಅಲ್ಲದೇ ಇಂದು ವಿಶ್ವ ಅಂಗಾಂಗ ದಿನಾಚರಣೆಯನ್ನು ಸಹ ನಾವು ಆಚರಿಸುತ್ತಿದ್ದೇವೆ. ಒಬ್ಬ ವ್ಯಕ್ತಿ ನಿಧನರಾದರೆ ಆತ 8 ಜೀವಗಳಿಗೆ ಅಂಗಾಂಗ ದಾನಮಾಡಬಹುದು. ಅಂಗಾಂಗ ದಾನ ಮಾಡಿದ ಸಾಧಕರಾದ ದಿ ನಟ ಸಂಚಾರಿ ವಿಜಯ್, ನಟ ಪುನೀತ್ ರಾಜ್ ಕುಮಾರ್, ಕೃಷ್ಣಪ್ಪ ಇವರನ್ನು ನಾವಿಂದು ನೆನೆಯಬೇಕೆಂದರು.

ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತಮ್ಮ ಕೈಯಲ್ಲಿ ಹಿಡಿದು ದೇಶ ಪ್ರೇಮ ಮೆರೆದರು. ದೇಶಭಕ್ತಿ ಗೀತೆಗಳು ಸಭಿಕರನ್ನು ರಂಜಿಸಿದವು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿಗಳಾದ ರಘುನಾಥ್ ಮಲ್ಕಾಪುರೆ, ಸಚಿವರಾದ ಸುನೀಲ್ ಕುಮಾರ್, ಡಾ.ಕೆ.ಸುಧಾಕರ್, ಗೋಪಾಲಯ್ಯ, ಬೈರತಿ ಬಸವರಾಜ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ರಜನೀಶ್ ಗೋಯಲ್ ಗೃಹ ಇಲಾಖೆ ಕಾರ್ಯದರ್ಶಿ ಮಾಲತಿ ಕೃಷ್ಣಮೂರ್ತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here